Nonಕನ್ನಡಿಗರ ಬೆಂಗಳೂರು

ಬೆಂಗಳೂರು..ಇದೊಂದು ಮಾಯನಗರಿ..ಮಹಾನಗರ..ಕರ್ನಾಟಕದ ರಾಜಧಾನಿ..ಜಗತ್ತಿನ ಪ್ರತಿಷ್ಠಿತ ನಗರಗಳಲ್ಲಿ ಒಂದು..ಸಿಲಿಕಾನ್ ಸಿಟಿ ಎಂಬ ಹೆಸರು ಕೂಡ.
ಕೇವಲ ಕರ್ನಾಟಕದವರಷ್ಟೇ ಅಲ್ಲದೇ ದೇಶ ವಿದೇಶಗಳಿಂದಲೂ ಜನರು ಇಲ್ಲಿ ಬದುಕು ಕಂಡುಕೊಳ್ಳಲು ಬರುತ್ತಾರೆ. ಇವರಲ್ಲಿ ಉದ್ಯಮಿಗಳು, ವ್ಯಾಪಾರಿಗಳು, ನೌಕರರು, ವೃತ್ತಿ ಆರಂಭಿಸುವವರು, ವಿದ್ಯಾರ್ಥಿಗಳು, ಕೂಲಿಕಾರರು ಈಗೆ ಎಲ್ಲಾ ವರ್ಗದವರೂ ಇಲ್ಲಿ ಕಾಣಸಿಗುವರು. ಕೆಂಪೇಗೌಡರು ಕಟ್ಟಿದ ಊರು ಇಂದು ವಿಶ್ವ ಪ್ರಸಿದ್ಧವಾಗಿದೆ. ಕರ್ನಾಟಕದ ಹೆಮ್ಮೆಯಾಗಿ ಹೊರಹೊಮ್ಮಿದೆ.
ಆದರೆ ದುರ್ದೈವದ ಸಂಗತಿ ಎಂದರೆ ಇಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರೇ ಹೆಚ್ಚು ಬದುಕು ಕಟ್ಟಿ ಕೊಂಡಿದ್ದಾರೆ. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಇಲ್ಲಿ ಬೆಲೆ ಇಲ್ಲ ಎಂಬುದು ನೀವು ಇಲ್ಲಿ ಸುತ್ತಾಡಿದಾಗಲೇ ತಿಳಿಯುವುದು. ನಾವಿರುವುದು ಕರ್ನಾಟಕದಲ್ಲೇನಾ ಎನ್ನುವಷ್ಟು ಕನ್ನಡವನ್ನ ಮರೆತಿದೆ ಈ ನಗರ. ದೂರದ ಬೀದರ್ ಬೆಳಗಾವಿ ಇಂದ ಹಿಡಿದು ಪಕ್ಕದ ಚಿಕ್ಕ ಬಳ್ಳಾಪುರ ರಾಮನಗರದಿಂದಲೂ ಬೆಂಗಳೂರಿಗೆ ಉದ್ಯೋಗ ಹರಸಿ ಬರುವರು. ನಮ್ಮ ನಾಡು ನಮ್ಮ ರಾಜಧಾನಿ ನಮ್ಮವರೇ ಇರುವ ನಗರ ಎಂದು ಜೀವನದ ಬಗ್ಗೆ ಕನಸುಗಳನ್ನು ತುಂಬಿಕೊಂಡು ಬಂದು ಉದ್ಯೋಗ ಹುಡುಕುತ್ತಾ ತಮ್ಮ ಓದಿಗೆ ತಕ್ಕನದ ಉದ್ಯೋಗ ದೊರಕದೆ ಇಷ್ಟವಿಲ್ಲದಿದ್ದರೂ ಬೇರೆ ಕೆಲಸಗಳನ್ನು ಮಾಡುತ್ತಾ ಕೆಲವರಿದ್ದರೆ ಇನ್ನು ಕೆಲವರು ತಾವು ಓದಿರುವ ವಿಷಯಕ್ಕೆ ಉದ್ಯೋಗ ಹುಡುಕಬೇಕು ಎಂದು ಪರದಾಡುತ್ತಿರುವವರು ಒಂದು ಕಡೆ. ಆದರೆ ಇವರಿಬ್ಬರಿಗೂ ಇರುವ ಒಂದೇ ತೊಂದರೆ ಮತ್ತು ತೊಡಕು ಎಂದರೆ English. ಹೌದು, ಕನ್ನಡ ನೆಲದಲ್ಲಿ ನಮ್ಮದೇ ಜಾಗದಲ್ಲಿ ಪರದೇಶದ ಭಾಷೆಯನ್ನು ಸರಿಯಾಗಿ ಮಾತನಾಡಲು ಬರಲಿಲ್ಲವೆಂದರೆ ಕೆಲಸ ಸಿಗದ ಪರಿಸ್ಥಿತಿ ಈ ನಗರದಲ್ಲಿ ನಿರ್ಮಾಣಗೊಂಡಿದೆ. ಒಬ್ಬ ಇಂಜಿನಿಯರಿಂಗ್ ವಿಧ್ಯಾರ್ಥಿ FCDಯಲ್ಲಿ ಪಾಸಾಗಿ ವಿಷಯದ ಬಗ್ಗೆ ಸಂಪೂರ್ಣ ಜ್ಞಾನವಿದ್ದರೂ ಕೂಡ ಆತನಿಗೆ English ಬರುವುದಿಲ್ಲವೆಂದು ಕೆಲಸ ಕೊಡದೇ ಇರುವ ಕಂಪೆನಿಗಳೇ ಹೆಚ್ಚು. ಇನ್ನು ಇವುಗಳ ಜೊತೆಗೆ ಆಂಧ್ರ, ತಮಿಳುನಾಡು ತರಹದ ಪಕ್ಕದ ರಾಜ್ಯದವರು ಇಲ್ಲಿ ತಮ್ಮ ಕಂಪೆನಿಗಳನ್ನ ಪ್ರಾರಂಭಿಸಿ ತಮ್ಮದೇ ರಾಜ್ಯದವರನ್ನ ಉದ್ಯೋಗಕ್ಕೆ ಸೇರಿಸಿಕೊಳ್ಳುತ್ತಿರುವುದು ನಮ್ಮ ಕನ್ನಡಿಗರಿಗೆ ಇನ್ನಷ್ಟು ತೊಂದರೆಯಾಗಿದೆ. ಇದನ್ನ ಮನಗಂಡು ನಮ್ಮ ರಾಜ್ಯದವರೇ ಕನ್ನಡಿಗರಿಗೆ ಸಹಾಯ ಮಾಡುವರೇ ಎಂದು ನೋಡಿದರೆ ನಮ್ಮವರಿಂದ ನಮ್ಮವರಿಗೆ ಸಹಾಯ ಹಸ್ತವಿಲ್ಲ.
ಕಷ್ಟಪಟ್ಟು ಪದವಿ ಸಂಪಾದಿಸಿ ಮನೆಯವರ ಬಗ್ಗೆ ಜೀವನದ ಬಗ್ಗೆ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಉದ್ಯೋಗ ಹುಡುಕಿಕೊಂಡು ಬಂದಿರುವ ಎಷ್ಟೋ ಅಸಂಖ್ಯಾತ ನಿರುದ್ಯೋಗಿಗಳ ಸಮಸ್ಯೆಯೇ ಇದು. ಕನ್ನಡ ನಮ್ಮದು ಕರ್ನಾಟಕ ನಮ್ಮದು ಎನ್ನುವ ರಕ್ಷಣಾ ವೇದಿಕೆಗಳು ಸಂಘಟನೆಗಳು ಯಾರೂ ಇಂತವರ ಸಹಾಯಕ್ಕೆ ನಿಂತಿಲ್ಲ. ಮೆಟ್ರೋದಲ್ಲಿ ಕನ್ನಡವಿಲ್ಲ ಎಂದು ಪ್ರತಿಭಟಿಸುವ ಸಂಘಟನೆಗಳಿಗೆ ನಮ್ಮ ಕರ್ನಾಟಕದವರಿಗೆ ಕೆಲಸ ಸಿಗುತ್ತಿಲ್ಲ ಎಂದು ಪ್ರತಿಭಟಿಸುವ ತಾಕತ್ತು ಇಲ್ಲವೇ..?ಸರ್ಕಾರದ ವಿರುದ್ಧ ಕೂಗು ಹಾಕುವ ಇವರಿಗೆ  ಕಾರ್ಪೊರೇಟ್ ಕಂಪನಿಗಳ ಜೊತೆ ಹೋರಾಡುವ ಶಕ್ತಿ ಇಲ್ಲವೇ..? ಅಥವಾ ಅದನ್ನೇ ಕುಗ್ಗಿಸಿರುವರ ಕಾರ್ಪೊರೇಟ್ ದೈತ್ಯಗಳು..?
ಬೆಂಗಳೂರಲ್ಲಿ ನವಂಬರ್ 1 ರಷ್ಟೇ ಕನ್ನಡ ರಾರಾಜಿಸುತ್ತದೆ ಅದು ಬಿಟ್ಟರೆ ಉಳಿದೆಲ್ಲ ದಿನಗಳಲ್ಲೂ ಇಲ್ಲಿ ಕನ್ನಡ ನಾಪತ್ತೆಯಾಗಿರುತ್ತದೆ. ಒಟ್ಟಿನಲ್ಲಿ English ವ್ಯಾಮೋಹ ಬೆಳೆಸಿಕೊಂಡ ನಮ್ಮ ಜನ ಇಂದು ತಮ್ಮದೇ ನೆಲದಲ್ಲಿ ಅಕ್ರಮಣಗೊಳಗಾಗಿದ್ದಾರೆ. ತಮ್ಮತನವನ್ನು ಮರೆತು ಬದುಕಲು ಹೆಣಗಾಡುತ್ತಿದ್ದಾರೆ. ಇದೆಲ್ಲದರ ನಡುವೆ ಉದ್ಯೋಗವನ್ನ ಹುಡಕುತ್ತಲೇ ಇರುವವರ ಪಾಡು ಯಾರು ಬಲ್ಲವರಿಲ್ಲ..ಯಾರೂ ಕೇಳುವವರಿಲ್ಲ.
ನೋಡುವ ಹೊಸ ಸರ್ಕಾರ ಬಂದಿದೆ. ಮಣ್ಣಿನ ಮಗ ಎಂದು ಹೇಳಿಕೊಳ್ಳುವವರು ಮುಖ್ಯಮಂತ್ರಿಯಾಗಿದ್ದಾರೆ, ಕನ್ನಡಿಗರ ರಕ್ಷಣೆಗೆ ನಾಡಿನ ವಿಧ್ಯಾರ್ಥಿಗಳಿಗೆ ಏನೆಲ್ಲಾ ಯೋಜನೆಗಳನ್ನು ತರುವರೊ ಸಹಾಯ ಮಾಡುವರೊ ಕಾದು ನೋಡಬೇಕಿದೆ.

Comments

Popular posts from this blog

ಆ ನೆನಪುಗಳು

Educated Fools

ಔಷಧಿ ದಂಧೆ